ಜಾರ್ಜಿಯನ್ ವಾಸ್ತು -
ಇಂಗ್ಲೆಂಡ್ ಮತ್ತು ಅಮೆರಿಕದ ಇಂಗ್ಲಿಷ್ ವಸಾಹತುಗಳಲ್ಲಿ 18ನೆಯ ಶತಮಾನದಲ್ಲಿ ಬೆಳೆದುಬಂದ ವಾಸ್ತು ಶೈಲಿ. ಈ ಎರಡೂ ದೇಶಗಳಲ್ಲಿ ಜಾರ್ಜಿಯನ್ ಎಂಬ ಪದದ ಬಳಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡುಬರುತ್ತದೆ. ಇಂಗ್ಲೆಂಡಿನಲ್ಲಿ 1714ರಿಂದ 1820ರವರೆಗಿನ ಜಾರ್ಜ್ ದೊರೆಗಳ ಆಳ್ವಿಕೆಯ ಕಾಲದ ವಾಸ್ತು ಮತ್ತು ಇತರ ಸೋದರ ಕಲೆಗಳ ಪ್ರಕಾರವೊಂದನ್ನು ಈ ಪದ ಸೂಚಿಸುತ್ತದೆ. ಈ ಶೈಲಿ ಬಹುವಾಗಿ ಇಟಲಿಯ ಆಂಡ್ರೇಯ ಪಾಲಾಡೀಯೋ ಎಂಬುವನಿಂದ ಪ್ರಭಾವಿತವಾಗಿದೆ. 1620ರ ಹೊತ್ತಿಗೆ 1ನೆಯ ಜೇಮ್ಸ್ ದೊರೆಯ ಕಾಲದಲ್ಲಿ ಇಂಗ್ಲೆಂಡಿಗೆ ಪರಿಚಿತವಾದ ಪಾಲಾಡೀಯನ್ ಶೈಲಿ 1720ರ ಹೊತ್ತಿಗೆ 1ನೆಯ ಜಾರ್ಜ್ ದೊರೆಯ ಕೈಕೆಳಗೆ ಹೆಚ್ಚು ಮನ್ನಣೆ ಗಳಿಸಿತು. ಉತ್ತಮವೂ ಸಾಂಪ್ರದಾಯಿಕವೂ ಮನೋಹರವೂ ಆದ ಈ ಶೈಲಿಯಲ್ಲಿ ಸುಖಸೌಲಭ್ಯಗಳಿಗಿಂತ ನಿಯಮಬದ್ಧತೆ ಅಥವಾ ನಿರ್ದುಷ್ಟತೆ ಮುಖ್ಯ. ಅಮೆರಿಕದಲ್ಲಿ ಸುಮಾರು 1700ರಿಂದ 1775ರಲ್ಲಿ ಸ್ವಾತಂತ್ರ್ಯ ಕ್ರಾಂತಿಯವರೆಗಿನ ಇಂಗ್ಲಿಷ್ ವಸಾಹತುಗಳ ವಾಸ್ತುಶೈಲುಗಳನ್ನೂ ಜಾರ್ಜಿಯನ್ ಎಂದು ಹೆಸರಿಸುತ್ತಾರೆ. ಮನೋವೃತ್ತಿಯಲ್ಲಿ ಸಾಂಪ್ರದಾಯಿಕ ಹಾಗೂ ಆಡಂಬರ ಭರಿತವಾದ ಈ ಶೈಲಿ ಸರ್ ಕ್ರಿಸ್ಟೊಫರ್ ರೆನ್ ಮತ್ತು ಅವನ ಇಂಗ್ಲಿಷ್ ಅನುಯಾಯಿಗಳ ಕೃತಿಗಳನ್ನಾಧರಿಸಿತ್ತು. ಅದರೆ 1750ರ ಅನಂತರ ಅದು ಹೆಚ್ಚು ಹೆಚ್ಚಾಗಿ ಪಾಲಾಡೀಯನ್ ಶೈಲಿಯ ಪ್ರಭಾವಕ್ಕೊಳಪಟ್ಟಿತು. ವಿಶೇಷವಾಗಿ ಕೆಂಪು ಇಟ್ಟಿಗೆಗಳಿಂದ ಕಟ್ಟಿದ ಅಂದಿನ ಮನೆಗಳಲ್ಲಿ ಬಿಳಿಬಣ್ಣದ ಮರಮುಟ್ಟುಗಳು, ಓರಣವಾದ ಹಾಗೂ ಸರಿದಾಡುವ ಕದದ ಚೌಕಟ್ಟುಳ್ಳ ಕಿಟಕಿಗಳು ಇರುತ್ತಿದ್ದವು. ಒಳಭಾಗದ ಮಧ್ಯದ ಪಡಸಾಲೆಗಳಲ್ಲಿ ಬಹು ವಿವರವಾಗಿ ಕಡೆದ ಕಟಾಂಜನಗಳಿಂದ ಕೂಡಿದ ಮಹಡಿಮೆಟ್ಟಲುಗಳು, ಗಾಢಕೆಂಪು ಅಥವಾ ಹಳದಿಬಣ್ಣದ, ಉಬ್ಬುತಗ್ಗಿನ ಗೋಡೆಗಳು ಹಾಗೂ ಬಿಳಿಯ ಪ್ಲಾಸ್ಟರ್‍ನಿಂದ ಕಟ್ಟಿದ ಒಳಮಾಳಿಗೆಗಳು ಇರುತ್ತಿದ್ದವು. ಇಡೀ ನಗರ ಏಕರೀತಿಯ ಚೌಕಗಳಿಂದಲೂ ಸಮಪ್ರಮಾಣದ ಪೌರಗೃಹಗಳಿಂದಲೂ ಕೂಡಿರುತ್ತಿತ್ತು. ಪೌರಗೃಹಗಳ ಮುಂಭಾಗದಲ್ಲಿ ಮೇಲ್ತರದ ಅರೆಗಂಬಗಳು, ಮೇಲ್ಭಾಗದಲ್ಲಿ ತ್ರಿಕೋಣಾಕೃತಿಯ ರಚನೆಯಳ್ಳ ಬಾಗಿಲು, ಕಿಟಕಿಗಳು ಹಾಗೂ ತುಂಬ ಅಲಂಕೃತವಾದ ಸೊಗಸಾದ ಅಚ್ಚುಗಳು ಇರುತ್ತಿದ್ದುವು. ಅವುಗಳ ಒಳಭಾಗ ಉಬ್ಬುತಗ್ಗಿನ ಗೋಡೆ, ಹಿತಮಿತವಾದ ಬಣ್ಣ, ರೋಮನ್ ರೀತಿಯ ಸಿಮೆಂಟ್ ಅಲಂಕಾರಗಳು ಹಾಗೂ ಚಿಪಂಡೇಲ್, ಹೆಪಲ್‍ಹ್ವೈಟ್ ಅಥವಾ ಷೆರ್ಟನ್ ಮಾದರಿಯ ಪೀಠೋಪಕರಣಗಳಿಂದ ಕೂಡಿದ್ದು ಅಲ್ಲಿ ರೇನಾಲ್ಡ್ ಮತ್ತು ಗೆಯನ್ಸ್ ಬರ್ನೊರ ಕೃತಿಗಳನ್ನು ಕೂಡಿಸಿರುವುದನ್ನು ಕಾಣಬಹುದು. ಈ ಶೈಲಿಯ ಕೆಲವು ಪ್ರಾಚೀನತಮ ಕಟ್ಟಡಗಳು ವರ್ಜೀನಿಯದ ರಾಜಧಾನಿ ವಿಲಿಯಮ್ಸ್ ಬರ್ಗ್‍ನಲ್ಲಿವೆ. ಫಿಲಡೆಲ್ಫಿಯದ ಇಂಡಿಪೆಂಡೆನ್ಸ್ ಹಾಲ್ (1745), ಬಾಸ್ಟನಿನ ಕಿಂಗ್ಸ್ ಚಾಪೆಲ್ ಮುಂತಾದವು ಈ ಶೈಲಿಯ ಇತರ ಕೆಲವು ಗಮನಾರ್ಹ ಉದಾಹರಣೆಗಳು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ